ಕುಂಡಲಿಗಿರಿಯಾಚಾರ್ಯ

 1865-1904. ಭಟ್ಟಾಕಳಂಕನ ಕರ್ಣಾಟಕ ಶಬ್ದಾನುಶಾಸನ ಪ್ರಕಾಶಿಕೆ ಎಂಬ ಹೆಸರಿನಲ್ಲಿ ಕನ್ನಡ ಭಾಷೆಯಲ್ಲಿ ತಂದವ. ನಂಜನಗೂಡು ತಾಲ್ಲೂಕು ಕಳಲೆ ಗ್ರಾಮದ ಬ್ರಹ್ಮವೆಂಕಟಾಚಾರ್ಯನ ಮಗ. ಬಾಲ್ಯದಲ್ಲಿ ಟಿ.ನರಸೀಪುರದ ತಿರುಮಕೂಡಲಿನಲ್ಲಿ ವೇದಾಧ್ಯಯನ ಮಾಡಿ, ಬಳಿಕ ಮೈಸೂರಿಗೆ ಬಂದು, ಅರಮನೆಯ ವಿದ್ಯಾರ್ಥಿವೇತನ ಪಡೆದು, ಪೆರಿಸ್ವಾಮಿ ತಿರುಮಲಾಚಾರ್ಯರ ಪಾಠಶಾಲೆಯಲ್ಲಿ ಎಂಟು ವರ್ಷಗಳ ಕಾಲ ಸಾಹಿತ್ಯ ವ್ಯಾಕರಣ ಶಾಸ್ತ್ರಗಳನ್ನು ಅಧ್ಯಯನ ಮಾಡಿದ. ಅನಂತರ ಮೈಸೂರಿನಲ್ಲಿ ಅಸ್ಥಾನ ಪಂಡಿತನಾದ. ಶ್ರವಣಬೆಳಗೊಳ, ಬೆಂಗಳೂರು, ಮೈಸೂರು, ಶಿವಮೊಗ್ಗ ಈ ಸ್ಥಳಗಳಲ್ಲಿ ಸಂಸ್ಕøತ ಮತ್ತು ಕನ್ನಡ ಅಧ್ಯಾಪಕನಾಗಿ ಕೆಲಸ ಮಾಡಿದ. ತಿರುವಾಂಕೂರು ಮಹಾರಾಜರಿಂದ ವರ್ಷಾಶನವನ್ನೂ ಬರೋಡ ಸಂಸ್ಥಾನದಿಂದ ರಾಜ ಮರ್ಯಾದೆಯನ್ನೂ ಪಡೆದ. ನಲವತ್ತನೆಯ ವಯಸ್ಸಿನಲ್ಲಿ ದೈವಾಧೀನನಾದ.

 ಜೀವಂಧರ ಚರಿತಂ (1895- ವಾದೀಭಸಿಂಹಸೂರಿಕೃತ ಕ್ಷೇತ್ರ ಚೂಡಾಮಣಿ), ಹರ್ಷಚರಿತ್ರೆ (1900-ಬಾಣಕವಿಯ ಹರ್ಷಚರಿತ್ರೆ) ಇವುಗಳ ಭಾಷಾಚಿತರವನ್ನೂ ಜೈಮಿನಿ ಭಾರತ ಕಥಾಸಂಗ್ರಹ, ಧರ್ಮಶರ್ಮಾಭ್ಯುದಯ (1901) ಎಂಬ ಗ್ರಂಥಗಳನ್ನೂ ರಚಿಸಿದ.

 1904ರಲ್ಲಿ ಭಟ್ಟಾಕಳಂಕನ ಕರ್ಣಾಟಕ ಶಬ್ದಾನುಶಾಸನವನ್ನು ಕನ್ನಡಿಗರಿಗೆ ಸುಭೋಧವಾಗುವಂತೆ ಕರ್ಣಾಟಕ ಶಬ್ದಾನುಶಾಸನ ಪ್ರಕಾಶಿಕೆ ಎಂಬ ಹೆಸರಿನಿಂದ ಕನ್ನಡಕ್ಕೆ ಅನುವಾದಿಸಿದ. ಇದು ಕೇವಲ ಅನುವಾದ ಗ್ರಂಥವಾಗಿಲ್ಲ; ಸಂಸ್ಕøತ ಸೂತ್ರಗಳನ್ನು ಇದ್ದಂತೆಯೇ ಇಟ್ಟು, ವೃತ್ಯರ್ಥವನ್ನು ಹೊಸಗನ್ನಡ ವಾಕ್ಯರೂಪದಿಂದ ರಚಿಸಿ ಪ್ರತಿಸೂತ್ರದಲ್ಲಿಯೂ ಕನ್ನಡಿಗರಿಗೆ ಅನುಪಯುಕ್ತವಾದ ವ್ಯಾಖ್ಯಾನಾಂಶವನ್ನು ಬಿಟ್ಟು, ಪತಂಜಲಿಯ ಮಹಾಭಾಷ್ಯದಿಂದಲೂ ಇತರ ಸಂಸ್ಕøತ ಕನ್ನಡ ವ್ಯಾಕರಣಗಳಿಂದಲೂ ಭಟ್ಟಾಕಳಂಕ ಉದಾಹರಿಸದಿದ್ದ ಹೆಚ್ಚಿನ ಆಧಾರಗಳನ್ನು ತೆಗೆದು ಸೇರಿಸಿ, ವಿಚಾರವೆಂದು ಹೆಸರಿಸಿ ಬರೆದುದಾಗಿದೆ. ಈ ಕಾರಣಗಳಿಂದ ಕನ್ನಡ ಭಾಷಾಭ್ಯಾಸಿಗಳಿಗೆ ಇದು ಉಪಯುಕ್ತ ಗ್ರಂಥವಾಗಿದೆ.       

(ಎನ್.ವಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ